Sunday, November 30, 2008

ನೋವೆಂದರೆ


ಎಷ್ಟೊಂದು ನೆಗೆಟಿವ್ ಯೋಚನೆಗಳು ತಲೆಯಲ್ಲಿ ಕೂತು ಬಿಟ್ಟಿದೆ. ಸಂಜೆಯಲಿ ಜೊತೆಗಿರುವ ಭಾವುಕ ಗೆಳೆಯ ಕೇಳುತ್ತಾನೆ " ನಾವು ಅರ್ಥವಿಲ್ಲದೆ ಬದುಕುತ್ತಿದ್ದೇವಾ?" !!!! ನಂಗೂ ಹಾಗೆ ಅನ್ಸಿದೆ, ನಾವು ಪುಸ್ತಕ ಓದುತ್ತೇವೆ; ಕಾದಂಬರಿಯಲ್ಲಿನ ಪಾತ್ರಗಳ ಸ್ವಾಭಿಮಾನ, ರೋಷ, ತನ್ನಂಬಿಕೆಯನ್ನು ಮೆಚ್ಚಿದಂತೆಯೇ ನಾವು ಬಡತನವನ್ನು ಪ್ರೀತಿಸುತ್ತೇವೆ. ಪ್ರೀತಿಸುವುದರೊಂದಿಗೆ ‘ ಡಿಸ್ಟೆನ್ಸ್’ ಕಾಯ್ದುಕೊಳ್ಳುವ ವ್ಯವಧಾನವನ್ನು ಕಳೆದುಕೊಂಡು ಅದನ್ನೇ ಸ್ವೀಕರಿಸಿದ್ದೇವೆ.


ದುರಂತವೆನಿಸುತ್ತದೆ. ಕ್ಲಾಸಿನಲಿ ಕಲಿಯುವಾಗ ಪಕ್ಕದಲಿ ಕೂತವರೆಲ್ಲ ಹೆಚ್ಚು ವ್ಯವಹಾರಿಕವಾಗಿ ವರ್ತಿಸುತ್ತಿದ್ದರೆ, ನಾವು ಅವರ ಸಂಘದಿಂದ ದೂರ ಕಾಪಾಡಿಕೊಂಡು ಹರ್ಷಿಸುತ್ತೇವೆ. ಕೊನೆಗೆ ನಮಗಿಷ್ಟದ ಮೇಷ್ಟ್ರಿಂದ ಹಿಡಿದು, ನಮ್ಮತನದ ಅವಕಾಶ ಸಿಕ್ಕೆಡೆಯಲ್ಲಿ ಬಾವುಟ ನೆಟ್ಟು ಸಂಭ್ರಮಿಸಿ ನಲಿಯುತ್ತೇವೆ. ನಮ್ಮ ಧ್ವನಿಗಳಲ್ಲಿನ ಪ್ರಾಮಾಣಿಕತೆಯು ಹಿಂಜರಿಕೆಯನ್ನೂ ಕಲಿಸಿಬಿಟ್ಟಿದೆ. ಓದಿದ್ದು ಸಾಲಲಿಲ್ವೇನೋ ಎಂದು ಓದಲು ಕೂರುತ್ತೇವೆ. ವಿವರಗಳ ಅಪೂರ್ಣತೆ ಕಾಡಿಸಿಕೊಂಡು ನಲುಗುತ್ತೇವೆ. ಏನೂ ಗಳಿಸದೆ ಮುಪ್ಪು ಆವರಿಸುವ, ನಮ್ಮದೇ ಗೇಲಿ, ಲೇವಡಿಗೆ ಗುರಿಯಾದ ವ್ಯಕ್ತಿಗಳಾಗಿಬಿಡುತ್ತೀವೋ ಎಂಬ ಹೆದರಿಕೆ ಕಾಡುತ್ತದೆ.


ನೋವೆಂದರೆ ಪ್ರಾಮಾಣಿಕತೆ ಮತ್ತು ಆದರ್ಶಗಳನ್ನು ಅನುಭವಿಸುವವನ ವ್ಯಸನ! ಈ ಗೀಳಿನಿಂದ ಹೊರಬರಲು ಮತ್ತೆ ಬಾಲಿಶವಾಗಿ ವರ್ತಿಸಬೇಕು. ಜೀವನ ಅಂದ್ರೆ ವ್ಯಾಪಾರ. ಅದನ್ನು ಸಮಾಜ ಒಪ್ಪಿಕೊಳ್ಲುತ್ತದೆ. ವ್ಯವಹಾರವೆಂದರೆ ಮುಖವಾಡ ತೊಟ್ಟುಕೊಂಡು ಬದುಕುವುದು.